Friday 25 August 2017

ಗಣೇಶ ಮಹಿಮೆ

ಗಣೇಶ ಮಹಿಮೆ


ಮೋದಕ ಪ್ರಿಯನ ಮೋಹಕ ಸ್ವರೂಪ
(ಈ ಲೇಖನ ಕನ್ನಡ ಪ್ರಭ ಪತ್ರಿಕೆ ಯಲ್ಲಿ ೨೦೧೪ ರಲ್ಲಿ ಪ್ರಕಟವಾಗಿದೆ ಮೂಲ ಲೇಖಕರು ಹರ್ಷ ಕಣೇಕಲ್ , ಬೆಂಗಳೂರು..)




ಓಂ ಶ್ರೀಗುರುಭ್ಯೋ ನಮಃ,

ಓಂ ಶ್ರೀಗಣೇಶಾಯ ನಮಃ,

ಓಂ ಶ್ರೀವಾಗ್ದೇವ್ಯೈ ನಮಃ

'ದಂತಾವಲಾಸ್ಯೋ ದಶಬಾಹುಯುಕ್ತೋ

ದಯಾಧುರೀಣೋ ಧೃತರತ್ನಕುಂಭಃ ೤

ದರಸ್ಮಿತೋ ದಾನರಸೇನಯುಕ್ತೋ

ದೇಯಾತ್ಸದಾ ಶಾಶ್ವತ

ದಿವ್ಯ ಸೌಖ್ಯಮ್ ॥

(ಟಿ.ಬಿ. ಲಕ್ಷ್ಮಣರಾವ್)

ಆನೆಯ ಮುಖವುಳ್ಳವನೂ, ಹತ್ತು ಬಾಹುಗಳುಳ್ಳವನೂ, ದಯಾವಂತರಲ್ಲಿ ಅಗ್ರಗಣ್ಯನೂ, (ತನ್ನ ಸೊಂಡಿಲಿನಲ್ಲಿ) ರತ್ನಕಲಶವನ್ನು ಧರಿಸಿರುವವನೂ, ಮಂದಹಾಸವನ್ನು ಬೀರುತ್ತಿರುವವನೂ, ಮದೋದಕದಿಂದ ಕೂಡಿರುವ (ಗಂಡಸ್ಥಳವುಳ್ಳವನೂ ಆದ ಶ್ರೀ ಮಹಾಗಣಪತಿಯು ನಮಗೆ) ಶಾಶ್ವತವೂ ದಿವ್ಯವೂ ಆದ ಸುಖವನ್ನು ನೀಡಲಿ.

ಶ್ರೀ ಮಹಾಗಣಪತಿ, ಲಂಬೋದರ, ಗಜಾನನ, ಹೇರಂಬ, ಗಣೇಶ, ವಿನಾಯಕ, ವಕ್ರತುಂಡ ಮುಂತಾದ ಅನಂತ ನಾಮಗಳಿಂದ ವಿಖ್ಯಾತನಾದ ಈ ದೇವನ ಮಹಿಮೆಯನ್ನು ಅರಿಯದವರು ಯಾರು? ಆರ್ಷೇಯವಾದ ಸನಾತನ ಸಂಸ್ಕೃತಿಯಲ್ಲಿ ಪರಂಪರಾಗತವಾಗಿ ಪೂಜಿಸಲ್ಪಡುತ್ತಿರುವ ನೂರಾರು ದೇವತೆಗಳಲ್ಲಿ ನಿಸ್ಸಂಶಯವಾಗಿ ಅತ್ಯಂತ ಲೋಕಪ್ರಿಯನೆಂದರೆ, ಈತನೇ! ಪ್ರಥಮ ಪೂಜಿತನೂ, ವಿಘ್ನಕರ್ತನೂ, ವಿಘ್ನಹರ್ತನೂ ಆದ ಈ ಮಂಗಲಮೂರ್ತಿಯ ಆವಿರ್ಭಾವ, ಸ್ವರೂಪ, ಮಂತ್ರರಹಸ್ಯ ಇತ್ಯಾದಿಗಳ ಬಗ್ಗೆ ಅನೇಕ ಪುರಾಣ ಉಪಪುರಾಣಗಳಲ್ಲೂ, ತಂತ್ರ ಆಗಮಗಳಲ್ಲೂ ಉಪಲಬ್ಧವಿದ್ದು ಜನಜನಿತವಾಗಿದೆ.

ಮೇರುಪರ್ವತವನ್ನೇ ಲೇಖನಿಯನ್ನಾಗಿ ಮಾಡಿಕೊಂಡು ಸಮುದ್ರವನ್ನೇ ಮಸಿಕುಡಿಕೆಯನ್ನಾಗಿಸಿ, ಭೂಮಂಡಲವನ್ನೇ ಪುಸ್ತಕವನ್ನಾಗಿಸಿ ಅದರಲ್ಲಿ ಶ್ರೀಗಣೇಶನ ಮಹಿಮೆಗಳನ್ನು ಬರೆದರೂ ಇನ್ನೂ ಅನಂತವಾಗಿ ಉಳಿಯುವುದು ಎನ್ನುತ್ತದೆ ಒಂದು ಸಂಸ್ಕೃತ ಸುಭಾಷಿತ. ಆದ್ದರಿಂದ ಶ್ರೀಗಣೇಶ ಪರವಾದ ಅಪಾರ ವಾಜ್ಞ್ಮಯ ಪ್ರಪಂಚದಿಂದ ಕೇವಲ ಆತನ ಪ್ರಮುಖ ದ್ವಾದಶನಾಮಗಳ ಭಾವಾರ್ಥ, ಆತನ ಆಯುಧ ಹಾಗೂ ವಾಹನದ ಸಾಂಕೇತಿಕಾರ್ಥ ಮುಂತಾದವುಗಳಿಗೆ ಈ ಲೇಖನವನ್ನು ಸೀಮಿತಗೊಳಿಸಲಾಗಿದೆ.

ಮುದ್ಗಲ ಪುರಾಣದಲ್ಲಿ ಪ್ರಸಿದ್ಧವಾದ ಶ್ರೀಗಣೇಶನ ದ್ವಾದಶನಾಮ ಸ್ತೋತ್ರದಲ್ಲಿ ಈ ಕೆಳಗಿನ ಹನ್ನೆರಡು ಹೆಸರುಗಳು ಬರುತ್ತವೆ.

ಪ್ರಥಮಂ ವಕ್ರತುಂಡಂ ಚ

ಏಕದಂತಂ ದ್ವಿತೀಯಕಂ ೤

ತೃತೀಯಂ ಕೃಷ್ಣಪಿಂಗಾಕ್ಷಂ

ಗಜವಕ್ತ್ರಂ ಚತುರ್ಥಕಮ್ ॥

ಲಂಬೋದರಂ ಪಂಚಮಂ ಚ

ಷಷ್ಠಂ ವಿಕಟಮೇವ

ಸಪ್ತಮಂ ವಿಘ್ನರಾಜೇಂದ್ರಂ

ಧೂಮ್ರವರ್ಣಂ ತಥಾಷ್ಟಮಂ ॥

ನವಮಂ ಭಾಲಚಂದ್ರಂ

ದಶಮಂ ತು ವಿನಾಯಕಮ್

ಏಕಾದಶಂ ಗಣಪತಿಂ

ದ್ವಾದಶಂ ತು ಗಜಾನನಮ್ ॥

ಈ ಹನ್ನೆರಡು ನಾಮಗಳ ಸಾಮಾನ್ಯ ಹಾಗೂ ವಿಶೇಷಾರ್ಥಗಳನ್ನು ಈಗ ಪರಿಚಯಿಸಿಕೊಳ್ಳೋಣ.

ವಕ್ರತುಂಡ

ಸಾಮಾನ್ಯವಾಗಿ ವಕ್ರತುಂಡ ಎಂದರೆ ಸೊಟ್ಟು ಮೋರೆಯವನು, ಸೊಟ್ಟಾಗಿರುವ ಸೊಂಡಿಲು ಇರುವವನು ಎಂದು ಪರಿಗಣಿಸುತ್ತಾರೆ. ಆದರೆ ಈ ನಾಮದ ಪಾರಮಾರ್ಥಿಕ ಅರ್ಥ ಹೀಗಿದೆ: 'ವಕ್ರಾನ್ ತುಂಡಯತಿ ಇತಿ ವಕ್ರತುಂಡಃ' ಎಂದರೆ ವಕ್ರ ನಡತೆಯುಳ್ಳವರಿಗೆ ಶಿಕ್ಷೆಕೊಟ್ಟು ಅವರನ್ನು ಯಾವಾತನು ಸರಿಯಾದ ಮಾರ್ಗಕ್ಕೆ ತರುತ್ತಾನೆಯೋ ಅವನೇ ವಕ್ರತುಂಡನೆಂದು ಪರಿಗಣಿಸಲ್ಪಟ್ಟಿದ್ದಾನೆ. ಮುದ್ಗಲ ಪುರಾಣದಲ್ಲಿ 'ವಕ್ರತುಂಡ' ನಾಮಾಂಕಿತನಾದ ಶ್ರೀಗಣೇಶನು ಮಾತ್ಸರ್ಯಾಸುರನನ್ನು ಸೋಲಿಸಿದ ಕತೆ ವಿಶದವಾಗಿದೆ.

ಹಿಂದೆ ಇಂದ್ರಿಯಗಳ ಒಡೆಯನಾದ ಇಂದ್ರನ ನಿರ್ಲಕ್ಷ್ಯದಿಂದ ಮಾತ್ಸರ್ಯಾಸುರನ ಜನನವಾಯಿತು. ತನ್ನತನವನ್ನು ಮರೆತರೆ ತಾನು ಅಪರಿಪೂರ್ಣನೆಂಬ ಭಾವವು ಮನಸ್ಸಿನಲ್ಲಿ ಮೂಡಿ ಅದರಿಂದ ಬೇರೆಯವರ ವಿಷಯದಲ್ಲಿ ಮಾತ್ಸರ್ಯವು ಉದಯಿಸುವುದು. ಇದೇ ಮಾತ್ಸರ್ಯಾಸುರನ ಹುಟ್ಟಿಗೆ ಕಾರಣ. ಆ ರಾಕ್ಷಸನು ಉಗ್ರವಾದ ತಪಸ್ಸನ್ನು ಮಾಡಿ ಪರಶಿವನನ್ನು ಒಲಿಸಿಕೊಂಡು ನಿರ್ಭಯನಾದನು. ಮೂರು ಲೋಕಗಳಲ್ಲೂ ಮಾತ್ಸರ್ಯವು ತಾಂಡವಆಡಿತು. ಅಶಾಂತಿಯು, ಉದ್ವಿಗ್ನತೆಗಳೂ ಮನೆ ಮಾಡಿದವು. ಈ ವೈಪರೀತ್ಯವನ್ನು ತಡೆಯಲು ದೇವತೆಗಳೆಲ್ಲರೂ ಭಗವಾನ್ ದತ್ತಾತ್ರೇಯರ ಮೊರೆ ಹೊಕ್ಕರು.

ಶ್ರೀದತ್ತಾತ್ರೇಯರು ಅವರಿಗೆಲ್ಲಾ ಶ್ರೀಮಹಾಗಣಪತಿಯನ್ನು 'ವಕ್ರತುಂಡ' ಎಂಬ ರೂಪದಲ್ಲಿ 'ಗಂ' ಮಹಾಮಂತ್ರದಿಂದ ಅರ್ಚಿಸಲು ಹೇಳಿದರು. ಅದರಂತೆ ದೇವತೆಗಳು ಮಾಡಲಾಗಿ ವಕ್ರತುಂಡನಾದ ಶ್ರೀಗಣೇಶನು ಪ್ರತ್ಯಕ್ಷನಾಗಿ ಅವರಿಗೆ ಅಭಯ ನೀಡಿದನು. ನಂತರ ಮಾತ್ಸರ್ಯಾಸುರನ ಮುಂದೆ ಯುದ್ಧ ಸನ್ನದ್ಧನಾಗಿ ಬರಲು, ಈತನ ದರ್ಶನ ಮಾತ್ರದಿಂದ ಭಯಭೀತನಾದ ಆ ಅಸುರನು ಶರಣಾಗತನಾದನು. 'ಓಂ ವಕ್ರತುಂಡಾಯ ಹುಮ್‌' ಎಂಬುದು ಶ್ರೀಗಣೇಶನ ಷಡಕ್ಷರೀ ಮಂತ್ರವೆಂದು ಪ್ರಖ್ಯಾತವಾಗಿದೆ.

ಏಕದಂತ

ಒಂದು ದಂತವು ಅಖಂಡವಾಗಿರುವುದರಿಂದ ಗಣಪತಿಗೆ ಈ ಹೆಸರು ಬಂದಿದೆ. ಗಣಪತಿಯ ಎಡಭಾಗದ ದಂತವು ಶ್ರೀ ಪರಶುರಾಮರ ಕೊಡಲಿಯ ಪ್ರಹಾರದಿಂದ ಮುರಿಯಿತೆಂದೂ, ಶ್ರೀಮನ್‌ಮಹಾಭಾರತವನ್ನು ಬರೆಯುವಾಗ ಲೇಖನಿಯಾಗಿ ಉಪಯೋಗಿಸುವುದಕ್ಕಾಗಿ ಗಣಪತಿಯೇ ಮುರಿದನೆಂದೂ ಬೇರೆ ಬೇರೆ ಕತೆಗಳಿವೆ. ಪಾರಮಾರ್ಥಿಕವಾಗಿ 'ಒಂದು (ಏಕ)' ಎನ್ನುವುದು 'ಬ್ರಹ್ಮ'ದ ನಿರ್ದೇಶಕವಾಗಿದೆ. ಇದರ ಅರ್ಥ ಏಕವಾಗಿರುವ 'ಬ್ರಹ್ಮದ' ಅನುಭೂತಿ ಬರುವ ದಿಶೆ ತೋರುವವನು ಎಂದಾಗುತ್ತದೆ.

ಶ್ರೀಗಣೇಶನು 'ಏಕದಂತ' ಎಂಬ ಅವತಾರವನ್ನೆತ್ತಿ ಮದಾಸುರನನ್ನು ಮಣಿಸಿದ ಕತೆ ಮುದ್ಗಲ ಪುರಾಣದಲ್ಲಿ ವರ್ಣಿತವಾಗಿದೆ. ಚ್ಯವನ ಮಹರ್ಷಿಯ ಮಗನಾದ ಮದಾಸುರನು ಅಸುರ ಗುರುವಾದ ಶುಕ್ರಾಚಾರ್ಯರಿಂದ ಮಹಾನ್‌ಶಕ್ತಿಬೀಜ ಮಂತ್ರವಾದ 'ಹ್ರೀಂ' ಕಾರದ ಉಪದೇಶವನ್ನು ಪಡೆದು, ಸಾವಿರಾರು ವರ್ಷಗಳ ಕಾಲ ಘೋರವಾದ ತಪಸ್ಸನ್ನಾಚರಿಸಿದನು. ಅನೇಕ ವರಗಳನ್ನು ಸಂಪಾದಿಸಿ ಲೋಕ ಕಂಟಕನಾದನು. ಇವನ ಉಪಟಳ ಸಹಿಸಲಾರದೆ ದೇವತೆಗಳು ಭಗವಾನ್ ಸನತ್ಕುಮಾರರನ್ನು ಆಶ್ರಯಿಸಿದರು. ಅವರು 'ಏಕದಂತ' ರೂಪದಲ್ಲಿ ಗಣೇಶನನ್ನು ಪೂಜಿಸಲು ದೇವತೆಗಳಿಗೆ ತಿಳಿಸಿದರು. ಅದರಂತೆ ಮಾಡಲಾಗಿ ಮದಾಸುರನ ಮುಂದೆ ಶ್ರೀಗಣೇಶನು 'ಏಕದಂತ' ರೂಪದಲ್ಲಿ ಪ್ರತ್ಯಕ್ಷನಾದನು. ಈತನನ್ನು ನೋಡಿ ಭಯಭೀತನಾದ ಮದಾಸುರನು ಸಂಪೂರ್ಣವಾಗಿ ಶರಣಾಗತನಾದನು. ಅವನನ್ನು ಕರುಣೆಯಿಂದ ಅನುಗ್ರಹಿಸಿದ ಏಕದಂತನು, ಎಲ್ಲಿ ತನ್ನ ಪೂಜೆಯು ಸಾತ್ವಿಕವಾಗಿ ನಡೆಯುವುದೋ ಅಲ್ಲಿ ಮದಾಸುರನು ಇರಬಾರದು ಮತ್ತು ಸ್ವಾರ್ಥ, ಅಸೂಯಾಪರ, ಅಹಂಕಾರ, ಮದಗರ್ವಿತರ ಕಾರ್ಯಗಳಲ್ಲಿ ಅವನು ನಿರ್ಭಯದಿಂದ ವಿಹರಿಸಬಹುದು ಎಂದು ಆದೇಶಿಸಿದನು.

ಕೃಷ್ಣಪಿಂಗಾಕ್ಷ

ಕೃಷ್ಣ ಪಿಂಗ ಅಕ್ಷ ಈ ರೀತಿ ಈ ಪದವು ರೂಪಗೊಂಡಿದೆ. ಕೃಷ್ಣ ಎಂದರೆ ಕಪ್ಪು, ಪಿಂಗ ಎಂದರೆ ಮಸುಕಾದುದು ಮತ್ತು ಅಕ್ಷ ಎಂದರೆ ಕಣ್ಣು. ಕಪ್ಪು ಎನ್ನುವ ಪದವು ಭೂಮಿಗೆ ಅನ್ವಯಿಸುತ್ತದೆ ಮತ್ತು ಮಸುಕಾದುದು ಎನ್ನುವುದು ಮೇಘಕ್ಕೆ ಅನ್ವಯಿಸುತ್ತದೆ. ಪೃಥ್ವಿ ಮತ್ತು ಮೇಘಗಳು ಯಾರ ಕಣ್ಣಾಗಿರುವುವೋ, ಯಾರು ಭೂಮಿ ಮತ್ತು ಮೇಘ ಮಂಡಲದಲ್ಲಿ ಎಲ್ಲವನ್ನೂ ನೋಡಬಲ್ಲನೋ ಅವನೇ ಕೃಷ್ಣಪಿಂಗಾಕ್ಷ.

ಗಜವಕ್ತ್ರ

ಗಜವಕ್ತ್ರ ಎನ್ನುವುದಕ್ಕೆ ಸಾಮಾನ್ಯಾರ್ಥ ಆನೆಯ ಮುಖವುಳ್ಳವನು ಎಂದು. 'ಗಜ' ಪದದ ವಿಶೇಷಾರ್ಥ ಮೇಘ. ಇದನ್ನು ದ್ಯು (ದೇವ)ಲೋಕದ ಪ್ರತಿನಿಧಿ ಎಂದು ಪರಿಗಣಿಸುತ್ತಾರೆ. ವಕ್ತ್ರ ಎಂದರೆ ಮುಖ. ಗಜವಕ್ತ್ರ ಎಂದರೇ ದ್ಯುಲೋಕವು ಯಾರ ಮುಖವು ಆಗಿರುವುದೋ ಅವನು ಎಂಬ ಅರ್ಥ ಬರುತ್ತದೆ. ಶ್ರೀಗಣೇಶನೇ ಮಹಾವಿರಾಟ್ ಎಂದು ನಾಮವು ನಿರೂಪಿಸುತ್ತದೆ.

ಲಂಬೋದರ

ಲಂಬ (ದೊಡ್ಡದು, ಬೃಹತ್) ಉದರ (ಹೊಟ್ಟೆ, ಗುಹೆ) ಪದಗಳ ಸಂಧಿಯೇ ಲಂಬೋದರ, ಬ್ರಹ್ಮಾಂಡವೇ ಯಾರ ಉದರದಲ್ಲಿ ಅಡಗಿದೆಯೋ ಅಂತಹ ವಿರಾಟ್ ಪುರುಷನೇ ಲಂಬೋದರ. ಕ್ರೋಧಾಸುರನೆಂಬ ಅಸುರನ ನಾಶಕ್ಕಾಗಿ 'ಲಂಬೋದರ' ಎಂಬ ಈ ಅವತಾರವನ್ನು ಶ್ರೀಗಣೇಶನು ಎತ್ತಿದನು ಎಂದು ಮುದ್ಗಲ ಪುರಾಣವು ಹೇಳುತ್ತದೆ.

ವಿಕಟ

ವಿ ಕ ತಅಕತ. ವಿ ಎಂದರೆ ವಿಶೇಷವಾಗಿ, ಕೃತ ಎಂದರೆ ಮಾಡಲ್ಪಟ್ಟಿದ್ದು ಮತ್ತು ಅಕತ ಎಂದರೆ ಮೋಕ್ಷ. ಆದ್ದರಿಂದಲೇ ವಿಕಟ ಎಂದರೆ ಯಾರು ವಿಶೇಷವಾದ ರೀತಿಯಲ್ಲಿ ಮೋಕ್ಷವನ್ನು ಪ್ರಸಾಧಿಸುತ್ತಾನೆಯೋ, ಅವನು ಎಂದರ್ಥ.

ವಿಘ್ನೇಶ

ವಿಘ್ನ ಈಶ ವಿಘ್ನೇಶ. ವಿಘ್ನಗಳನ್ನು ನಿಯಂತ್ರಿಸಿ ನಾಶ ಮಾಡುವವನೇ ವಿಘ್ನೇಶ. ಈಶ ಶಬ್ದವು ಈ ಶ ಹೀಗೆ ರೂಪುಗೊಂಡಿದೆ. ಈ - ಈಕ್ಷತೇ ಎಂದರೇ ನೋಡುವುದು ಮತ್ತು ಶ-ಶಮಯತೇ ಎಂದರೆ ಶಾಂತಗೊಳಿಸುವುದು. ಆದ್ದರಿಂದ ಈಶ ಎಂದರೆ ವಿಘ್ನಕಾರಕವಾದ ರಜ ತಮೋ ಮುಂತಾದ ಲಹರಿಗಳ ಬಗ್ಗೆ ಗಮನವಿರಿಸಿ ನಾಶ ಮಾಡುವವನು ಎಂದು ಅರ್ಥವಾಗುತ್ತದೆ.

ಧೂಮ್ರವರ್ಣಂ

ಧೂಮ್ರ ಎಂದರೆ ಹೊಗೆ. ಘನರೂಪದಲ್ಲಿರುವ ಸಗುಣ ಮತ್ತು ನಿರ್ಗುಣ ರೂಪಗಳ ನಡುವಿನ ಮಧ್ಯದ ಅವಸ್ಥೆಯೆಂದರೆ ಹೊಗೆ. ಯಾರು ಇಂತಹ ಧೂಮ್ರವರ್ಣದವನಾಗಿದ್ದಾನೆಯೋ ಅವನೇ ಧೂಮ್ರವರ್ಣ. 'ಹೊಗೆ ಇದ್ದಲ್ಲಿ ಅಗ್ನಿಯೂ ಇದೆ' ಎಂಬ ನಿಯಮದಂತೆ ಗಣಪತಿಯಲ್ಲಿ ಅಗ್ನಿತತ್ವವೂ ಇದ್ದೇ ಇರುತ್ತದೆ.

ಭಾಲಚಂದ್ರ

ಭಾಲ ಎಂದರೆ ಹಣೆ. ಚಂದ್ರಮನನ್ನು ಯಾರು ಭಾಲದಲ್ಲಿ ಧರಿಸಿದ್ದಾನೆಯೋ ಅವನೇ ಬಾಲಚಂದ್ರ. ಮೂಲತಃ ಶಿವನ ಹೆಸರಾದ ಇದು ಅವರ ಮಗನಾದ್ದರಿಂದ ಗಣಪತಿಗೂ ಬಂದಿತು.

ವಿನಾಯಕ

'ವಿನಾಯಕ' ಶಬ್ದವು 'ವಿಶೇಷರೂಪೇಣ ನಾಯಕಃ' ಹೀಗೆ ನಿಷ್ಪನ್ನವಾಗಿದೆ. ನಾಯಕನ ಎಲ್ಲಾ ವೈಶಿಷ್ಟ್ಯಗಳೂ ಇರುವವನು ಎನ್ನುವುದು ಇದರ ಅರ್ಥ.

ಗಣಪತಿ

ಗಣ ಪತಿ ಗಣಪತಿ. ಪತಿ ಎಂದರೆ ಪಾಲನೆ ಮಾಡುವವನು. ಗಣ ಎನ್ನುವುದು, ಪಾಣಿನಿ ಮಹರ್ಷಿಗಳ ಪ್ರಕಾರ ಅಷ್ಟವಸುಗಳ ಸಮೂಹ. 'ವಸು' ಎಂದರೆ ದಿಕ್ಕುಗಳು, ದಿಕ್ಪಾಲರು ಎಂಬ ಅರ್ಥವೂ ಇದೆ. ಗಣಪತಿಯು ದಿಕ್ಕುಗಳ ಪತಿ, ಸ್ವಾಮಿಯಾಗಿದ್ದಾನೆ. ಅವನ ಅನುಮತಿಯಿಲ್ಲದೆ ಇತರ ದೇವತೆಗಳು ಯಾವ ದಿಕ್ಕಿನಿಂದಲೂ ಬರಲಾರರು. ಒಮ್ಮೆ ಗಣಪತಿಯು ದಿಕ್ಕುಗಳನ್ನು ತನ್ನ ನಿಯಂತ್ರಣದಿಂದ ಮುಕ್ತಗೊಳಿಸಿದರೆ ನಮ್ಮ ಆರಾಧ್ಯದೇವತೆಯು ಅಲ್ಲಿ ಬರಲು ಸಾಧ್ಯವಾಗುತ್ತದೆ. ಆದ್ದರಿಂದಲೇ ಯಾವುದೇ ಮಂಗಳಕಾರ್ಯವನ್ನು ಅಥವಾ ದೇವತಾಪೂಜೆಯನ್ನು ಮಾಡುವಾಗ ಮೊದಲು ಗಣಪತಿ ಪೂಜೆ ಮಾಡುವುದು.

ಗಜಾನನ

ಆನೆಯ ಮುಖವುಳ್ಳವನು ಎನ್ನುವುದು ಸಾಮಾನ್ಯ ಅರ್ಥ. 'ಸಮಾಧಿನಾ ಯೋಗಿನೋ ಯತ್ರ ಗಚ್ಛಂತಿ ಇತಿ ಗಃ' (ಸಮಾಧಿಯಿಂದ ಯೋಗಿಗಳು ಎಲ್ಲಿಗೆ ತಲುಪುವರೋ ಅದೇ ಗಕಾರವು). ಮುದ್ಗಲ ಪುರಾಣದ ಪ್ರಕಾರ 'ಗ' ಎಲ್ಲಿ ಎಲ್ಲವೂ ಲಯವಾಗುತ್ತದೋ ಆ ತತ್ವ ಮತ್ತು 'ಜ' ಯಾವುದರಿಂದ ಜಗತ್ತು ಉಂಟಾಗುತ್ತದೆಯೋ ಅಂತಹ ತತ್ವ. ಆದ್ದರಿಂದ 'ಗಜ' ಎಂದರೆ ಬ್ರಹ್ಮ. ಯಾರ ತಲೆಯು ನಿರುಪಾಧಿಕ ಬ್ರಹ್ಮಪರವಾಗಿಯೂ, ಯಾರ ದೇಹವು ಸಂಪೂರ್ಣ ವಿಶ್ವಮಯವೂ ಆಗಿದೆಯೋ ಅವನೇ ಗಜಾನನ.

ವಿಶ್ವರೂಪ ಗಣಪತಿ

ಸಾಮಾನ್ಯವಾಗಿ ಶ್ರೀಗಣಪತಿಯು ಚತುರ್ಭುಜನಾಗಿರುತ್ತಾನೆ. ಆತನ ಕೆಳಗಿನ ಹಸ್ತಗಳಲ್ಲಿ ಅಭಯಮುದ್ರೆ ಮತ್ತು ಮೋದಕವನ್ನು ಗ್ರಹಿಸಿರುತ್ತಾನೆ ಮತ್ತು ಮೇಲಿನ ಎರಡು ಹಸ್ತಗಳಲ್ಲಿ ಪಾಶ ಮತ್ತು ಅಂಕುಶಗಳನ್ನು ಧರಿಸಿರುತ್ತಾನೆ. ಅಭಯಮುದ್ರೆ ಎಂದರೆ 'ಶರಣಾಗತರಿಗೆ ಸಂಪೂರ್ಣ ರಕ್ಷಣೆ ನೀಡಿದ್ದೇನೆ' ಎಂದು ತೋರಿಸುವ ಒಂದು ಕ್ರಮ. ಇನ್ನು ಮೋದಕವೆಂದರೆ, 'ಮೋದ' ಎಂದರೆ ಆನಂದ ಮತ್ತು 'ಕ' ಎಂದರೆ ಚಿಕ್ಕಭಾಗ. ಮೋದಕವೆಂದರೆ ಆನಂದದ ಒಂದು ಚಿಕ್ಕಭಾಗ. ಮೋದಕದ ಆಕಾರವು ತೆಂಗಿನಕಾಯಿಯಂತಿದೆ. ಅಂದರೆ 'ಖ' ಎನ್ನುವ ಬ್ರಹ್ಮರಂಧ್ರವಿರುವ ಟೊಳ್ಳಿನಂತಿರುತ್ತದೆ. ಕುಂಡಲಿನಿಯು 'ಖ' ವರೆಗೂ ತಲುಪಿದಾಗ ಆನಂದದ ಅನುಭೂತಿ ಬರುತ್ತದೆ. ಶ್ರೀಗಣೇಶನ ಕೈಯಲ್ಲಿರುವ ಮೋದಕವೆಂದರೆ ಆನಂದವನ್ನು ಪ್ರಸಾದಿಸುವ ಶಕ್ತಿ. ಇನ್ನೊಂದು ಅರ್ಥದಲ್ಲಿ ಮೋದಕವು ಜ್ಞಾನದ ಪ್ರತೀಕವಾಗಿದೆ.

ಪಾಶವು, ತಾಮಸ, ಅಜ್ಞಾನ, ಮಾಯೆ ಇತ್ಯಾದಿಗಳ ಸಂಕೇತ. ಇದು ಸಾಂಸಾರಿಕ ಬಂಧನದ ಪ್ರತೀಕ. ಶ್ರೀಗಣೇಶನು ಕೈಯಲ್ಲಿ ಪಾಶವನ್ನು ಹಿಡಿದು ಇವುಗಳ ಮೇಲೆ ತನ್ನ ನಿಯಂತ್ರಣವನ್ನು ತೋರುತ್ತಿದ್ದಾನೆ.

'ಅಂಕುಶವು ಪ್ರವೃತ್ತಿರೂಪವಾದ ರಜೋಗುಣವನ್ನು ತೋರುವುದು. ಇದು ಆನಂದ ಮತ್ತು ಜ್ಞಾನಾರ್ಜನೆಗಳಿಗೆ ವಿಘ್ನಮಾಡುವ ಶಕ್ತಿಗಳನ್ನು ನಾಶ ಮಾಡುವುದು. ಅಪಾರವು, ಅನಂತವು ಆದ ಆನಂದಾಮೃತಸಾಗರದ ಕೆಲವು ಬಿಂದುಗಳನ್ನು ಬೊಗಸೆಯಲ್ಲಿ ತುಂಬಿಕೊಂಡು ಅದರಿಂದಲೇ ಆ ದೇವದೇವನಿಗೆ ಅರ್ಘ್ಯವನ್ನು ನೀಡುವ ರೀತಿಯಲ್ಲಿ ಈ ಪುಟ್ಟ ಲೇಖನದಲ್ಲಿ ಆ ಮಹದ್ವಸ್ತುವಿನ ವಿಶ್ಲೇಷಣೆಯು ನಡೆದಿದೆ.

ನಮೋನಮಃ ಸುರವರ

ಪೂಜಿತಾಂಘ್ರಯೇ

ನಮೋನಮೋ ನಿರುಪಮ

ಮಂಗಲಾತ್ಮನೆ

ನಮೋನಮೋ ವಿಪುಲ ಪದೈಕಸಿದ್ಧಯೇ

ನಮೋನಮಃ

ಕರಿಕಲಭಾನನಾಯ ತೇ ॥

ದೇವತಾ ಶ್ರೇಷ್ಠರಿಂದ ಪೂಜಿತವಾದ ಪಾದಕಮಲಗಳನ್ನು ಉಳ್ಳವನಿಗೆ ನಮಸ್ಕಾರಗಳು. ಅಸದೃಶವಾದ ಮಂಗಲ ಸ್ವರೂಪನಿಗೆ ನಮಸ್ಕಾರಗಳು. ಅತಿಶಯವಾದ ಅದ್ವಿತೀಯ ಸಿದ್ಧಿಸ್ವರೂಪನಿಗೆ (ಮೋಕ್ಷ ಸ್ವರೂಪನಿಗೆ) ನಮಸ್ಕಾರಗಳು. ಪುಟ್ಟ ಆನೆಯ ಮುಖದಂತೆ ಮುದ್ದಾದ ಮುಖದವನಿಗೆ ನಮಸ್ಕಾರಗಳು.

'ಸರ್ವಂ ಶ್ರೀಗಣೇಶಪಾದಾರವಿಂದಾರ್ಪಣಮಸ್ತು'

-ಹರ್ಷ ಕಣೇಕಲ್, ಬೆಂಗಳೂರು

 ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು